ಪೀಳಿಗೆಗಳ ಪರ್ಯಾಯ - 
ಕೆಲವು ರೀತಿಯ ಪ್ರಾಣಿಗಳ ಹಾಗೂ ಸಸ್ಯಗಳ ಜೀವನ ಚರಿತ್ರೆಯಲ್ಲಿ ಎರಡು ಪ್ರತ್ಯೇಕ ಪೀಳಿಗೆಗಳಿದ್ದು, ಬೆಳೆವಣಿಗೆಯ ಕಾಲದಲ್ಲಿ ಇವೆರಡು ಪರ್ಯಾಯವಾಗಿ ಕಾಣಿಸಿಕೊಳ್ಳುವುದು. (ಆಲ್ಟರ್ನೇಷನ್ ಆಫ್ ಜನರೇಷನ್ಸ್). ಇದಕ್ಕೆ ಉದಾಹರಣೆ ಪಾಲಿಸ್ಟೋಮೆಲದ ಜೀವನಚರಿತ್ರೆ. ಇದು ಪ್ರೋಟೊಜೋವ ವಂಶಕ್ಕೆ ಸೇರಿದ ಕಡಲಿನಲ್ಲಿ ಮಾತ್ರ ವಾಸಿಸುವ ಏಕಕೋಶ (ನಿರ್ಕೋರ) ಜೀವಿ. ಈ ಜೀವಿಯ ದೇಹದ ಸುತ್ತ ಸುರುಳಿಯಾಕಾರದಲ್ಲಿ ಸುತ್ತಿಕೊಂಡಿರುವ ಅನೇಕ ಕೋಣೆಗಳ ಚಿಪ್ಪಿದೆ. ಈ ಚಿಪ್ಪಿನ ನಡುವೆ ಇರುವ ಮೂಲ ಕೋಣೆಯ ಗಾತ್ರವನ್ನನುಸರಿಸಿ ಈ ಜೀವಿಯಲ್ಲಿ ಎರಡು ರೂಪಗಳನ್ನು ಗುರುತಿಸಬಹುದು ಒಂದರಲ್ಲಿ ಮೂಲ ಕೋಣೆ ದೊಡ್ಡದಾಗಿದೆ ಇದಕ್ಕೆ ಹಿರಿಯ ಮೂಲಕೋಣೆರೂಪಿ (ಮೆಗಲೋಸ್ಪೆರಿಕ್) ಎಂದು ಹೆಸರು. ಹಾಗೆಯೇ ಚಿಕ್ಕ ಮೂಲ ಕೋಣೆಯುಳ್ಳ ರೂಪಕ್ಕೆ ಕಿರಿಯ ಮೂಲ ಕೋಣೆ ರೂಪಿ (ಮೈಕ್ರೋಸ್ಫೆರಿಕ್) ಎಂದು ಹೆಸರು. ಇವು ಭಿನ್ನ ಪ್ರಭೇದಗಳಲ್ಲ. ಒಂದೇ ಪ್ರಾಣಿ ತನ್ನ ಜೀವನ ಚರಿತ್ರೆಯ ಬೇರೆ ಬೇರೆ ಸಮಯದಲ್ಲಿ ಈ ಎರಡು ರೂಪಗಳನ್ನು ತೋರಿಸುವ ಲಕ್ಷಣ. ಅಂದರೆ ಇದು ದ್ವಿರೂಪತ್ವವನ್ನು ಪ್ರದರ್ಶಿಸುತ್ತದೆ. ಅದರ ಜೀವನ ಚಕ್ರದಲ್ಲಿ ಹಿರಿಯ ಮೂಲಕೋಣೆರೂಪಿ ರೂಪ ಲಿಂಗರೀತಿಯಲ್ಲಿ ಸಂತಾನೋತ್ಪತ್ತಿಯನ್ನು ನಡೆಸಿ ಗ್ಯಾಮೀಟುಗಳನ್ನು ಉತ್ಪತ್ತಿ ಮಾಡುತ್ತದೆ. ಇವು ಕೂಡಿಕೊಂಡು ಯುಗ್ಮಕಣವಾಗಿ ಬೆಳೆದು ಕಿರಿಯ ಮೂಲಕೋಣೆ ರೂಪಿಯಾಗುವುದು. ಈ ಕಿರಿಯ ಮೂಲಕೋಣೆ ರೂಪಿಯು ನಿರ್ಲಿಂಗ ರೀತಿಯಲ್ಲಿ ಅಮೀಬ ತೆರನ ರೂಪಿಗಳನ್ನು ಉತ್ಪತ್ತಿ ಮಾಡುತ್ತದೆ. ಇವು ನೇರವಾಗಿ ಹಿರಿಯ ಮೂಲಕೋಣೆ ರೂಪಿಗಳಾಗಿ ಬೆಳೆಯುತ್ತವೆ. ಇಲ್ಲಿ ಎರಡು ರೂಪಗಳ ಜೊತೆಗೆ ಲಿಂಗ ರೀತಿಯಲ್ಲಿ ಮತ್ತು ನಿರ್ಲಿಂಗ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಸುವ ಎರಡು ಪ್ರತ್ಯೇಕ ಪೀಳಿಗೆಗಳಿವೆ. ಇವು ಜೀವನದಲ್ಲಿ ಪರ್ಯಾಯವಾಗಿ ಕಾಣಿಸಿಕೊಳ್ಳುತ್ತವೆ. ಒಂದು ಪೀಳಿಗೆ ನೇರವಾಗಿ ಅದೇ ಪೀಳಿಗೆಯನ್ನು ಉತ್ಪತ್ತಿ ಮಾಡಲಾರದು. 

ಈ ತೆರನ ಜೀವನಕ್ರಮವನ್ನು ಪ್ರೋಟೊಜೊóೀವ ವಿಭಾಗಕ್ಕೆ ಸೇರಿದ ಇನ್ನಿತರ ಅನೇಕ ಪ್ರಾಣಿಗಳಲ್ಲೂ ಬಹುಕೋಶ ಜೀವಿಗಳಾದ ಒಬಿಲಿಯ ಮುಂತಾದ ಜೀವಿಗಳಲ್ಲೂ ಕಾಣಬಹುದು.
(ಎಂ.ಎ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ